ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಅವಧೂತ ಯಕ್ಷಗುರು ಹೊಸ್ತೋಟರಿಗೆ ಪದ್ಮಶ್ರೀ ಬರಲಿ

ಲೇಖಕರು :
ಕಡತೋಕಾ ಗೋಪಾಲಕೃಷ್ಣ ಭಾಗವತ
ಶನಿವಾರ, ಜುಲೈ 18 , 2015

ಯಕ್ಷಗಾನ ರಂಗಭೂಮಿಗೆ ಆಗಾಗ ಸಂಭ್ರಮಿಸುವ ಅವಕಾಶ ಒದಗಿಬರುತ್ತಿರುತ್ತದೆ. ಕಲಾವಿದರಿಗೆ ಉನ್ನತ ಪ್ರಶಸ್ತಿ ಬಂದಾಗಲೆಲ್ಲ ಎಲ್ಲೆಲ್ಲೂ ಅದರದ್ದೇ ಮಾತು. ಯಕ್ಷಗಾನ ಪ್ರಿಯರಿಗಂತೂ ಯಕ್ಷಗಾನ ಎಷ್ಟು ಆಪ್ತವೆಂದರೆ ಯಾರಿಗಾದರೂ ಮಹತ್ವದ ಪ್ರಶಸ್ತಿ ಬಂದರೆ ಅದು ತಮಗೇ ಬಂದಂತೆ ಸಂತೋಷಪಟ್ಟು ಸಂಭ್ರಮಿಸುತ್ತಾರೆ.

ಇದೀಗ ತಮ್ಮ ಇಡಿಯ ಜೀವನವನ್ನೇ ಯಕ್ಷಗಾನಕ್ಕಾಗಿ ಮುಡಿಪಾಗಿಟ್ಟ ಎಪ್ಪತ್ತೈದರ ವಯೋವೃದ್ಧ ಅವಧೂತ ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಯಕ್ಷಗಾನಕ್ಕೆ ಹೊಸತೇನೂ ಅಲ್ಲ. ಡಾ.ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೊಳ್ಯೂರು ರಾಮಚಂದ್ರ ರಾವ್ ಮೊದಲಾದ ನಾಮಾಂಕಿತರನ್ನು ಈಗಾಗಲೇ ಯಕ್ಷಗಾನದ ಸೇವೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗುರುತಿಸಿ ಗೌರವಿಸಿದೆ. ಇದೀಗ ಹೊಸ್ತೋಟದವರಿಗೆ ಅದು ಸಂದಿದೆ. ಚಿಟ್ಟಾಣಿಯವರಿಗೆ ಪದ್ಮಶ್ರೀ ಬಂದ ಮೇಲೆ ಯಕ್ಷಗಾನಕ್ಕೆ ಬಂದ ಮತ್ತೊಂದು ರಾಷ್ಟ್ರ ಪ್ರಶಸ್ತಿ ಇದಾದುದರಿಂದ ಇದು ಹೊಸ್ತೋಟರ ಕಿರೀಟಕ್ಕಷ್ಟೇ ಅಲ್ಲ ಯಕ್ಷಗಾನದ ಮುಕುಟಕ್ಕೂ ಮತ್ತೊಂದು ಗರಿ.

ಹೊಸ್ತೋಟದವರಿಗೆ ಪ್ರಶಸ್ತಿ ಸನ್ಮಾನಗಳು ಹೊಸತಲ್ಲ. ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಅಸಂಖ್ಯಾತ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಸಾಮಾನ್ಯವಾಗಿ ಉನ್ನತ ಪ್ರಶಸ್ತಿಗಳು ಯಾವುದೇ ಕ್ಷೇತ್ರಗಳಿಗೆ ಬಂದಾಗ ಇತ್ತೀಚೆಗೆ ವಿವಾದದ ಹೊಗೆಯಾಡುವುದಿದೆ. ಅದಕ್ಕೆ ಪ್ರಶಸ್ತಿ ಕೊಡುವ ಮಾನದಂಡ, ಪ್ರಶಸ್ತಿ ಪಡೆದವರ ಸಂಶಯಾತೀತವಲ್ಲದ ಅರ್ಹತೆ-ಇವೆಲ್ಲ ಕಾರಣವಾಗಿರುತ್ತದೆ. ಅಥವಾ ಇತ್ತೀಚೆಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಸರ್ವಸಮ್ಮತವಾದ ಸಾಧಕರ ಕೊರತೆಯಿರುವುದೂ ಒಂದು ಕಾರಣವಾಗಿರಬಹುದು. ಆದರೆ ಹೊಸ್ತೋಟದವರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗ ಒಕ್ಕೊರಲಿನಿಂದ ಸಮುದಾಯ ಇದೊಂದು ಯೋಗ್ಯ ಆಯ್ಕೆಯೆಂದು ತಲೆದೂಗಿದೆ.

ಪೂರ್ಣ ಪ್ರಮಾಣದ ವೇಷಧಾರಿ, ಭಾಗವತ, ಮದ್ದಳೆಗಾರ, ಚಂಡೆವಾದಕ ಅಥವಾ ಸಂಘಟಕ ಇದು ಯಾವುದೂ ಅಲ್ಲದಿದ್ದರೂ ಹೊಸ್ತೋಟ ಯಕ್ಷಗಾನದ ರಾಯಭಾರಿಯಾಗಿ ಹೊರಪ್ರಪಂಚಕ್ಕೆ ಕಾಣುತ್ತಾರೆ. ಯಕ್ಷಗಾನದ ಪರಿಚಯವಿಲ್ಲದ ದೂರದ ಯಾವುದೋ ಊರಿನ ಅನಾಮಧೇಯನಲ್ಲಿ 'ಯಕ್ಷಗಾನ ಗೊತ್ತಿದೆಯಾ?...' ಎಂದರೆ ಅವನು 'ನಾನು ಹೊಸ್ತೋಟ ಮಂಜುನಾಥರನ್ನು ನೋಡಿದ್ದೇನೆ' ಎಂದು ಹೇಳುವಷ್ಟರ ಮಟ್ಟಿಗೆ ಅವರ ಖ್ಯಾತಿ.

ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ಹನಮಂತಿಯ ಒಂದು ಸಣ್ಣ ಮಜರೆ ಹೊಸ್ತೋಟದಲ್ಲಿ ಜನಿಸಿ, ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡು ಹೆರವರ ಮನೆಯಲ್ಲಿ ಮನೆವಾರ್ತೆ ಮಾಡಿ ಜೀವಿಸುವ ತಾಯಿಯ ಪೋಷಣೆಯಲ್ಲಿ ದಾರಿದ್ರ್ಯದಲ್ಲಿಯೇ ಬೆಳೆದ ಹೊಸ್ತೋಟರು ತಾರುಣ್ಯದಲ್ಲಿಯೇ ವಿರಕ್ತರಾದರು. ಬ್ರಹ್ಮಚಾರಿಯಾಗಿ ರಾಮಕೃಷ್ಣಾಶ್ರಮದಲ್ಲಿ ಬ್ರಹ್ಮಚರ್ಯವನ್ನು ಸ್ವೀಕರಿಸಿದರೂ 'ಮಠ' ಸೇರದೇ ಯಕ್ಷಗಾನ ರಂಗಭೂಮಿಯನ್ನೇ ತಮ್ಮ ಆಶ್ರಮವನ್ನಾಗಿ ಮಾಡಿಕೊಂಡು ಪ್ರಸಂಗ ರಚನೆಯ ಕಾಯಕದಲ್ಲಿ ತೊಡಗಿದವರು. ಯಕ್ಷಗಾನದ ಎಲ್ಲ ವಿಭಾಗಗಳಲ್ಲಿಯೂ ಸಾಕಷ್ಟು ಪರಿಣತಿಯಿದ್ದರೂ ವೃತ್ತಿಯಾಗಿ ಅದನ್ನು ಅವಲಂಬಿಸದೇ, ಪರಿವ್ರಾಜಕನಂತೆ ಊರಿಂದ ಊರಿಗೆ ತಿರುಗುತ್ತಾ ಯಕ್ಷಗಾನದ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಮನೆ ಮನೆಯಲ್ಲಿ ಯಕ್ಷಗಾನದ ಬೀಜ ಬಿತ್ತಿದ ಭೈರಾಗಿ.

ನಿಜ, ಹೊಸ್ತೋಟದವರು ತಮ್ಮದೇ ಆದ ಒಂದು ಯಕ್ಷಗಾನ ಕಲಿಕಾ ಕೇಂದ್ರವನ್ನು ತೆರೆಯಲಿಲ್ಲ; ತಮ್ಮದೇ ಅದ ಒಂದು ತಂಡವನ್ನು ಕಟ್ಟಿ ಪ್ರದರ್ಶನ ನೀಡುವ ಗೋಜಿಗೆ ಹೋಗಲಿಲ್ಲ; ಆದರೆ ಉತ್ತರ ಕನ್ನಡ ಮತ್ತು ಶಿವಮೊಗ್ಗಾ ಜಿಲ್ಲೆಯ ಯಾವ ಊರಿಗೆ ಹೋದರೂ ಒಂದು ತಲೆಮಾರಿನಲ್ಲಿ ಹೊಸ್ತೋಟದವರಿಂದ ಹೆಜ್ಜೆ ಕಲಿಯದ ಹವ್ಯಾಸೀ ಕಲಾವಿದರೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಹೆಚ್ಚು ಮಾತನಾಡದೇ ಕಲಿಸುವ ಕಾಯಕದಲ್ಲಿ ತೊಡಗಿದ ಹೊಸ್ತೋಟರು ಶಿವಮೊಗ್ಗಾದ ಅಂಧ ಬಾಲಕರಿಗೆ ಯಕ್ಷಗಾನ ತರಬೇತಿ ನೀಡಿ ಅವರಿಂದ ಸಮರ್ಥ ಪ್ರದರ್ಶನವನ್ನು ನೀಡಿದಾಗ ಜನ ನಿಬ್ಬೆರಗಾದರು. ರಾಷ್ಟ್ರ ಮಟ್ಟದಲ್ಲಿ ಅವರ ಈ ಸಾಧನೆ ಗುರುತಿಸಲ್ಪಟ್ಟಿತು. ಅಲ್ಲಿಯವರೆಗೆ ಹೊಸ್ತೋಟ ಎಂದರೆ ಮದುವೆಯಾಗದೇ ಊರೂರು ಅಲೆದು ಕಂಡವರಿಗೆಲ್ಲ ಯಕ್ಷಗಾನ ಕಲಿಸುವ ಸಾಮಾನ್ಯ ಯಕ್ಷಶಿಕ್ಷಕ ಎಂದಷ್ಟೇ ತಾತ್ಸಾರದಿಂದ ನೋಡುತ್ತಿದ್ದ ಸಮುದಾಯ ಅವರನ್ನು ಆದರಿಸತೊಡಗಿತು. ಇಲ್ಲಿಯವರೆಗೆ 'ನೀವು ಯಾರಲ್ಲಿ ಯಕ್ಷಗಾನ ಕಲಿತಿರಿ?' ಎಂದು ಕೇಳಿದರೆ ಯಾರ್ಯಾರದ್ದೋ ಹೆಸರು ಹೇಳುತ್ತಿದ್ದ ಅವರ ಶಿಷ್ಯರು ಗಟ್ಟಿಯಾಗಿ 'ನಾನು ಹೊಸ್ತೋಟದವರಲ್ಲಿ ಕಲಿತದ್ದು' ಎಂದು ಹೆಮ್ಮೆಯಿಂದ ಹೇಳಿಕೊಳ್ಳತೊಡಗಿದರು.

ಯಕ್ಷಗಾನ ಕಲಿಕೆಯ ಸಂದರ್ಭದಲ್ಲಿ ಮತ್ತು ಅದು ಯಕ್ಷಗಾನ ರಂಗಭೂಮಿಯಲ್ಲಿ ತಂದ ಅಮೂಲಾಗ್ರ ಬದಲಾವಣೆಯ ಚರಿತ್ರೆಯಲ್ಲಿ ಹೊಸ್ತೋಟರ ಕಲಿಸುವಿಕೆಗೆ ಮಹತ್ವದ ಸ್ಥಾನವಿದೆ. ಇಂದು ಯಕ್ಷಗಾನದಲ್ಲಿ ಹವ್ಯಾಸೀ ಮತ್ತು ವೃತ್ತಿ ಎಂದು ಎರಡು ವಿಭಾಗಗಳು ಸ್ಪಷ್ಟ ರೂಪ ಪಡೆಯುತ್ತಿದೆ. ಇದೊಂದು ವಿದಾಯಕವಾದ ಬೆಳವಣಿಗೆ. ಇನ್ನೂ ಪೂರ್ಣವಾಗಿ ವ್ಯವಸಾಯೀ ಕಲಾವಿದರ ಮತ್ತವರ ಗ್ಲಾಮರ್ ಪ್ರಪಂಚದ ಕರಿನೆರಳಿನಿಂದ ಯುವ ಹವ್ಯಾಸೀ ಕಲಾವಿದರು ಹೊರಬಂದಿಲ್ಲವಾದರೂ, ಎಲ್ಲೋ ಒಂದು ಕಡೆ ಪಾಮರ ರಂಜನೆಯಿಂದ ಗಲ್ಲಾ ಪೆಟ್ಟಿಗೆಯನ್ನು ತುಂಬಿಸುವುದೇ ವೃತ್ತಿ ಕಲಾವಿದರ ಮುಖ್ಯ ಗುರಿ ಎಂಬಂತ ಸ್ಥಿತಿ ನಿರ್ಮಾಣವಾದಾಗ ಕಲೆಯನ್ನು ಮತ್ತೆ ವ್ಯವಸಾಯೀಕರಣದ ಕುಂಭೀಪಾಕದಿಂದ ಮೇಲೆತ್ತಬೇಕಾದುದು ಹವ್ಯಾಸೀ ರಂಗಭೂಮಿ ಅಥವಾ ಪ್ರಯೋಗ ರಂಗಭೂಮಿ. ಮೇಲ್ನೋಟಕ್ಕೆ ಹೊಸ್ತೋಟರು ಒಂದು ಕಡೆ ಸ್ಥಿರವಾಗಿ ನಿಂತು ಯಕ್ಷಶಿಕ್ಷಣದ ಕಾಯಕದಲ್ಲಿ ತೊಡಗಿದ್ದರೆ.

ಹೆಚ್ಚಿನ ಸಾಧನೆ ಮಾಡಬಹುದಾಗಿತ್ತು ಎನಿಸಿದರೂ ಬಡಗು ತಿಟ್ಟಿನ ಯಕ್ಷಗಾನ ನಡೆದುಬಂದ ದಾರಿಯನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ಹೊಸ್ತೋಟರು ಭೈರಾಗಿಯಂತೆ ಉರೂರು ತಿರುಗಿ ಯಕ್ಷಗಾನ ಕಲಿಸಿದ ಕಾಯಕಕ್ಕೆ ಚಾರಿತ್ರಿಕ ಮಹತ್ವವಿದೆ ಎಂದೆನಿಸದಿರದು. ಯಕ್ಷಗಾನವನ್ನು ವ್ಯವಸ್ಥಿತವಾಗಿ ಕಲಿಯಬೇಕೆಂದರೆ ಪೂರ್ಣ ಪ್ರಮಾಣದ ಕಲಾಕೇಂದ್ರಕ್ಕೆ ಸೇರಿಕೊಳ್ಳುವುದೊಂದೇ ಮಾರ್ಗೋಪಾಯವಾಗಿದ್ದ 80ರ ದಶಕದಲ್ಲಿ ವೃತ್ತಿಯನ್ನಾಗಿ ಯಕ್ಷಗಾನವನ್ನು ಕೈಗೊಳ್ಳುವ ಉದ್ದೇಶವಿಲ್ಲದ ಹವ್ಯಾಸೀ ಉತ್ಸಾಹಿಗಳಿಗೆ ಪೂರ್ಣ ಪ್ರಮಾಣದ ಕಲಾಕೇಂದ್ರದಿಂದ ಬೇರೆಯಾದ ಅರೆಕಾಲಿಕ ಕಲಿಕೆಯ ವ್ಯವಸ್ಥೆಯ ಕೊರತೆಯಿತ್ತು. ಅದರಲ್ಲಿಯೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಲಿಯುವ ಅವಕಾಶವೇ ಸೀಮಿತವಾಗಿತ್ತು. ಎಲ್ಲೋ ಶಾಲೆಯಲ್ಲಿ ಒಂದು ಪ್ರದರ್ಶನಕ್ಕೆ ತಯಾರಿ ನಡೆಸಿ ಒಮ್ಮೆ ಗೆಜ್ಜೆ ಕಟ್ಟಿ ಕೈಬಿಡಬೇಕಾಗಿತ್ತು. ಪೂರ್ಣ ಪ್ರಮಾಣದ ಕಲಾಕೇಂದ್ರಗಳೂ ಯಕ್ಷಗಾನದ ಒಂದು ವರ್ಗದ ಈ ಅಗತ್ಯವನ್ನು ಮನಗಾಣುವ ಸ್ಥಿತಿಯಲ್ಲಿರಲಿಲ್ಲ. ಆಗ ಹೊಸ್ತೋಟರು ಉತ್ತರ ಕನ್ನಡ ಮತ್ತು ಶಿವಮೊಗ್ಗಾ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಈ ಕೊರತೆಯನ್ನು ನೀಗಿಸಿದರು. ಹೊಸ್ತೋಟ ಒಂದು 'ವಾಕಿಂಗ್ ರೆಪರ್ಟರಿ'ಯಾದದ್ದು ಯಕ್ಷಗಾನದ್ದೊಂದೇ ಅಲ್ಲ ಭಾರತೀಯ ರಂಗಭೂಮಿಯ ಚರಿತ್ರೆಯಲ್ಲಿಯೇ ಒಂದು ಮೈಲಿಗಲ್ಲು. ನಿಜ. ಅವರಿಂದ ಕಲಿತವರೆಲ್ಲ ದೊಡ್ಡ ಕಲಾವಿದರಾಗಲಿಲ್ಲ. ಆದರೆ ಇಂದು ಹವ್ಯಾಸಿಗಳು, ಮಹಿಳೆಯರು ಮತ್ತು ಮಕ್ಕಳು ಯಕ್ಷಗಾನದಲ್ಲಿ ಈ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ಹೊಸ್ತೋಟರ ಸೇವೆ ಮೂಲ ಕಾರಣ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಇಂದು ಮಹಿಳೆಯರಿಗೆ ಕಲಿಸುವವರು ತುಂಬಾ ಜನ ಸಿಗಬಹುದು. ಆದರೆ ದಶಕಗಳ ಹಿಂದೆ ಹಾಗಿರಲಿಲ್ಲ. ಪ್ರತಿಫಲಾಪೇಕ್ಷೆಯಿಲ್ಲದೆ, ಅದಕ್ಕಿಂತಲೂ ನೈತಿಕವಾಗಿ ಗಟ್ಟಿ ವ್ಯಕ್ತಿತ್ವದ ನಿರುಪದ್ರವಿ ಹೊಸ್ತೋಟರು ಮನೆಯಲ್ಲಿಯೇ ಉಳಿದುಕೊಂಡು ಕುಣಿತ ಕಲಿಸುತ್ತಾರೆಂದರೆ ಮಹಿಳೆಯರಿಗೆ ಮುಜುಗರವಿಲ್ಲದೇ ಕಲಿಯುವ ಅವಕಾಶ ದೊರೆಯಿತು. ಒಮ್ಮೆ ರಂಗ ಪ್ರವೇಶಿಸಿದ ಮೇಲೆ ಅವರಲ್ಲಿ ಅನೇಕರು ಧೈರ್ಯದಿಂದ ಮುಂದುವರಿದಿರಬಹುದು.

ಹೊಸ್ತೋಟದವರ ಈ ಕಾಯಕ ಹೊಸದೊಂದು ಉದ್ಯೋಗದ ಸಾಧ್ಯತೆಯನ್ನು ತೆರೆದು ತೋರಿತು. ನೃತ್ಯ, ಅಭಿನಯವನ್ನು ತಕ್ಕ ಮಟ್ಟಿಗೆ ಕಲಿತ ಕಲಾವಿದನೊಬ್ಬ ಮೇಳಕ್ಕೆ ಹೋಗದೇ ಯಕ್ಷಗಾನ ಕಲಿಸುವುದರಿಂದಲೇ ಜೀವನೋಪಾಯವನ್ನು ಕಂಡುಕೊಳ್ಳಬಹುದು ಎಂಬುದು ಅನೇಕರಿಗೆ ಮನವರಿಕೆಯಾಯಿತು. ಇಂದು ಇದು ಎಷ್ಟು ದೊಡ್ಡ ಪ್ರಮಾಣದಲ್ಲಿದೆಯೆಂದರೆ ಉರೂರಿನಲ್ಲಿ ಯಕ್ಷಶಿಕ್ಷಕರು ಲಭ್ಯವಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ ಹೊಸ್ತೋಟರನ್ನು ಯಕ್ಷಗಾನದ ಹವ್ಯಾಸೀ ರಂಗಭೂಮಿಯ ಆದ್ಯ ಪ್ರವರ್ತಕ ಎಂದರೆ ತಪ್ಪೇನೂ ಇಲ್ಲ. ಹೊಸ್ತೋಟರಿಗೆ ಕೇಂದ್ರ ಸಂಗಿತ ನಾಟಕ ಪ್ರಶಸ್ತಿ ದೊರಕಿದೆ. ಅವರಿಗೆ ಪದ್ಮಶ್ರೀಯೂ ದೊರೆಯಲಿ ಮತ್ತು ದೊರೆಯುವಂತೆ ಅವರ ಅಪಾರ ಶಿಷ್ಯವೃಂದ, ಯಕ್ಷಗಾನ ಸಂಘಟನೆಗಳು ಒಟ್ಟಾಗಿ ಪ್ರಯತ್ನಿಸಲಿ. ಹೊಸ್ತೋಟರಿಗೆ ಈಗಲೇ 75 ವರ್ಷ. ಅನೇಕ ಹಿರಿಯ ಕಲಾವಿದರಂತೆ ಸೂಕ್ತ ಮನ್ನಣೆ ಸಿಗುವ ಮೊದಲೇ ಅಸ್ತಂಗತರಾಗದೇ ಉನ್ನತ ಗೌರವವನ್ನು ಯಕ್ಷಗಾನಕ್ಕೆ ತರಲಿ ಎಂದು ಹಾರೈಸೋಣ.

*******************


ಕೃಪೆ : ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಹೊಸ್ತೋಟರ ದೀರ್ಘ ಸಂದರ್ಶನವನ್ನೊಳಗೊಂಡ ಜುಲೈ 2015ರ ಯಕ್ಷರಂಗ ಸಂಚಿಕೆಯ ಸಂಪಾದಕೀಯ

ಲೇಖಕರು ``ಯಕ್ಷರಂಗ`` ಮಾಸಪತ್ರಿಕೆಯ ಸಂಪಾದಕರು


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ